ಜಾರ್ಜೆಟ್ -
ಎಂಟು ಬೆದಗಳ ಕ್ರೇಪ್ ನೇಯ್ಗೆಯ ಅತಿ ನವುರಾದ ವಸ್ತ್ರವಿಶೇಷ. ಇದರ ತಯಾರಿಕೆಗೆ ಅತ್ಯುತ್ತಮ ಈಜಿಪ್ಟಿಯನ್ ದಾರ ಬೇಕು. ಇದರಲ್ಲಿ 80ನೆಯ ಸಂಖ್ಯೆಯ ಹಾಸು ಮತ್ತು 120ನೆಯ ಸಂಖ್ಯೆಯ ಹೊಕ್ಕನ್ನು ಉಪಯೋಗಿಸಿ, ಅಂಗುಲಕ್ಕೆ 100 ಹಾಸು ಮತ್ತು 96 ಹೊಕ್ಕನ್ನು ಅಳವಡಿಸಿರುತ್ತಾರೆ. ಇನ್ನೊಂದು ಬಗೆಯ ಜಾರ್ಜೆಟನ್ನು ಸಾದಾ ನೇಯ್ಗೆಯಲ್ಲಿ ತಯಾರಿಸುತ್ತಾರೆ. ಇದಕ್ಕೆ 2 ಎಳೆ ಹುರಿಯ ಬಾಚಿದ ಸೆಕೆಲ್ ದಾರ ಬೇಕು. ಇದರ ಹಾಸಿನಲ್ಲಿ 2 ಬಲಹುರಿ ಮತ್ತು 2 ಎಡಹುರಿಯ ದಾರಗಳು ಅನುಕ್ರಮವಾಗಿ ಬರುವಂತೆ ಏರ್ಪಾಡು ಉಂಟು. ಹೊಕ್ಕು ಎಲ್ಲ ವಿಧದಲ್ಲಿಯೂ ಹಾಸಿನಂತೆಯೇ ಇರುತ್ತದೆ. ಹೀಗಾಗಿ ಬಟ್ಟೆಯಲ್ಲಿ ಏರ್ಪಡುವ ಸುಕ್ಕು ಅದಕ್ಕೆ ಕ್ರೇಪಿನ ರೂಪವನ್ನು ಕೊಡುತ್ತದೆ. ಸಾಧಾರಣವಾಗಿ ಇದಕ್ಕೆ 2/100ನೆಯ ಸಂಖ್ಯೆಯ ಹಾಸು ಮತ್ತು 2/80ನೆಯ ಸಂಖ್ಯೆಯ ಹೊಕ್ಕನ್ನು ಅಂಗುಲಕ್ಕೆ 60 ಹಾಸು ಮತ್ತು 58 ಹೊಕ್ಕನ್ನು ಅಳವಡಿಸಿರುತ್ತಾರೆ. ರೇಷ್ಮೆ ಜಾರ್ಜೆಟ್ ಬಟ್ಟೆಯನ್ನು ಅನುಕರಣ ಮಾಡಿ, ಅತಿ ಹೆಚ್ಚು ಹುರಿ ಮಾಡಿದ ಹಾಸುಹೊಕ್ಕಿನ ದಾರಗಳನ್ನು ಉಪಯೋಗಿಸಿ ತಯಾರಿಸಿದ ಹತ್ತಿಯ ಕ್ರೇಪ್ ಬಟ್ಟೆಗೆ ಹತ್ತಿಯ ಜಾರ್ಜೆಟ್ ಎಂದು ಹೆಸರು. ಸಾದಾ ನೇಯ್ಗೆಯ ಈ ಬಟ್ಟೆಯಲ್ಲಿ 2/70ನೆಯ ಸಂಖ್ಯೆಯ ದಾರಗಳನ್ನು ಉಪಯೋಗಿಸಿ ಅಂಗುಲಕ್ಕೆ 50 ಹಾಸು, 46 ಹೊಕ್ಕನ್ನು ಹಾಕಿರುತ್ತಾರೆ; ಮತ್ತು ಬಲ, ಎಡಹುರಿಗಳನ್ನು 2,2ರ ಅನುಕ್ರಮದಲ್ಲಿ ಹಾಸುಹೊಕ್ಕುಗಳೆರಡರಲ್ಲೂ ಅಳವಡಿಸಿರುತ್ತಾರೆ. ಆದರೆ ಅಗ್ಗದ ಬಟ್ಟೆಗಳಲ್ಲಿ ಹಾಸುಹೊಕ್ಕಿನ ದಾರಗಳನ್ನು ಸಾಧಾರಣವಾಗಿ ಎಡ ಅಥವಾ ಬಲ ದಿಕ್ಕಿನಲ್ಲಿ ಮಾತ್ರ ಹುರಿ ಮಾಡಿರುತ್ತಾರೆ.												   (ಕೆ.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ